ಮಸ್ಕಿ		
	ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲ್ಲೂಕಿನ ಒಂದು ಗ್ರಾಮ. ಪ್ರಸಿದ್ಧ ಐತಿಹಾಸಿಕ ಸ್ಥಳ. ಲಿಂಗಸುಗೂರಿನಿಂದ ಆಗ್ನೇಯಕ್ಕೆ 26 ಕಿಮೀ ದೂರದಲ್ಲಿ ಮಸ್ಕಿನದಿಯ ಬಲದಂಡೆಯ ಮೇಲೆ ಬೆಂಗಳೂರು- ಬಿದರೆ ಹೆದ್ದಾರಿಯಲ್ಲಿದೆ. ಜನಸಂಖ್ಯೆ 8,688. ಇದು ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲೊಂದಾಗಿದ್ದು ಇಲ್ಲಿ ವೈದ್ಯಕೀಯ ಕೇಂದ್ರ. ಪ್ರವಾಸಿಮಂದಿರ, ವಿದ್ಯುತ್ ಅಂಚೆ, ತಂತಿ, ದೂರವಾಣಿ ಸೌಲಭ್ಯಗಳು ಇವೆ. ಭಾನುವಾರ ಈ ಸ್ಥಳದಲ್ಲಿ ಸಂತೆ ನಡೆಯುತ್ತದೆ.

	ಮಸ್ಕಿ ಪ್ರಾಗೈತಿಹಾಸಿಕ ಕಾಲದಿಂದ ವಿಜಯನಗರ ಕಾಲದ ತನಕ ಒಂದು ಮುಖ್ಯ ಸ್ಥಳವಾಗಿತ್ತು. ಇಲ್ಲಿ ಪ್ರಾಗೈತಿಹಾಸಿಕ ಕಾಲದ ಒಂದು ಬೃಹತ್ ನೆಲೆಯಲ್ಲದೆ, ಚಾರಿತ್ರಿಕ ಕಾಲದ ಕೆಲವು ಕಟ್ಟಡಗಳೂ ಮತ್ತು ಶಾಸನಗಳು ಕೂಡ ಉಳಿದು ಬಂದಿವೆ. ವಿಜಯನಗರದ ಸದಾಶಿವರಾಯ ಹಾಗೂ ಅಚ್ಯುತರಾಯರ ಕಾಲದ  ಎರಡು ಶಾಸನಗಳಿಂದ ಮಸ್ಕಿಗೆ ಆಗ ಮೊಸಗೆ  ಎಂಬ ಹೆಸರಿತ್ತೆಂದು ಇದು ಮೊಸಗೆ ನಾಡು ಎಂಬ ಪ್ರಾಂತ್ಯ ವಿಭಾಗದ ಮುಖ್ಯ ಸ್ಥಳವಾಗಿತ್ತೆಂದೂ ತಿಳಿಯುತ್ತದೆ. ಸೇವುಣ ಸಿಂಘ ಮತ್ತು ಕಲ್ಯಾಣದ ಚಾಳುಕ್ಯ ವಂಶದ ಜಗದೇಕಮಲ್ಲ ಇವರ ಕಾಲದ ಶಾಸನಗಳಲ್ಲಿ ಇದನ್ನು ರಾಜಧಾನಿ ಪಿರಿಯ ಮೊಸಂಗಿ ಎಂದು ಕರೆ ಯಲಾಗಿದೆ. ಜಗದೇಕಮಲ್ಲನ ಇನ್ನೆಂದು ಶಾಸನದಲ್ಲಿ ಇದನ್ನು ಬ್ರಹ್ಮಪುರಿ ಮೊಸಂಗಿ ಎಂದು  ಕರೆಯಲಾಗಿದೆ. ಈ ಗ್ರಾಮದ ಬಿಳಿಯ ಗುಡ್ಡವೊಂದರ ಮೇಲೆ ಸುಮಾರು 13ನೆಯ ಶತಮಾನದ ಒಂದು ಶಿವಾಲಯವಿದೆ.

	ಮಸ್ಕಿಗೆ ವಿಶೇಷ ಪ್ರಸಿದ್ಧಿ ದೊರೆತದ್ದು  ಇಲ್ಲಿರುವ ಅಶೋಕನ ಶಿಲಾ ಶಾಸನದಿಂದ. ಇದು ದುರ್ಗದ ಗುಡ್ಡದ ಪಾಶ್ಚಿಮ ಪಾಶ್ರ್ವದಲ್ಲಿ ದೊಡ್ಡ ಬಂಡೆಯೊಂದರ ಮೇಲಿದೆ. ಇದು 1915ರಲ್ಲಿ ಮೌನೇಶ ಚವ್ಹಾಣ ಎಂಬ ಗಣಿ ಎಂಜಿನಿಯರ್  ಬೆಳಕಿಗೆ ಬಂತು. ಈ ಶಾಸನವೂ ಅಶೋಕನ ಲಘುಪ್ರಸ್ತರ ಶಾಸನಗಳಲ್ಲೋದು (ನೋಡಿ ಅಶೋಕ). ಆದರೆ ಆ ತನಕ ದೊರಕಿದ್ದ ಅಶೋಕನ ಶಾಸನಗಳಲ್ಲೆಲ್ಲ ದೇವಾನಾಂಪ್ರಿಯ ಎಂಬ ಉಲ್ಲೇಖ ಮಾತ್ರ ಕಂಡು ಬಂದಿದ್ದರೆ, ಈ ಶಾಸನದಲ್ಲಿ ದೇವಾನಾಂಪ್ರಿಯ ಅಶೋಕ ಎಂದು ಉಲ್ಲೇಖಿತವಾಗಿದ್ದು ಭಾರತದ ಅನೇಕ ಕಡೆಗಳಲ್ಲಿ ದೊರೆತ ಈ ಬಗೆಯ ಶಾಸನಗಳನ್ನು ಹಾಕಿಸಿದವನು ಮೌರ್ಯಕುಲದ ಅಶೋಕನೇ ಎಂಬ ಅಂಶವನ್ನು ಮೊತ್ತಮೊದಲಿಗೆ ಇದು ಸ್ಪಷ್ಟಪಡಿಸಿತು.

	ಮಸ್ಕಿಯ ಪ್ರಾಗೈತಿಹಾಸಿಕ ನೆಲೆ ಸಣ್ಣ ಗುಡ್ಡಗಳ ವರ್ತುಲದ ಮಧ್ಯೆ ಆಯಕಟ್ಟಿನ ಸ್ಥಳದಲ್ಲಿದೆ. 1888ರ ಸುಮಾರಿನಲ್ಲಿ ರಾಬರ್ಟ್ ಬ್ರೂಸ್‍ಫೂಟ್ ಈ ನೆಲೆಯನ್ನು ಸಂದರ್ಶಿಸಿ, ನವಶಿಲಾಯುಗದ ಮತ್ತು ಅನಂತರ ಕಾಲದ ಅನೇಕ ವಸ್ತುಗಳನ್ನು ಸಂಗ್ರಹಿಸಿದ್ದರು.  1928-29 ರಲ್ಲಿ ಲಿಯೊನಾರ್ಡ್‍ಮನ್  ರಾಯಚೂರು ಜಿಲ್ಲೆಯ ಪ್ರಾಚೀನ ವಸ್ತುಗಳನ್ನು ಕುರಿತು ಬರೆಯುತ್ತ ಮಸ್ಕಿಯಲ್ಲಿ ದೊರೆತ ಕುರುಹುಗಳಿಗೆ ವಿಶೇಷ ಸ್ಥಾನವನ್ನು ಕೊಟ್ಟಿದ್ದಾರೆ.1935-37ರಲ್ಲಿ ಆಗಿನ ಹೈದರಾಬಾದ್ ಸರ್ಕಾರ ಇಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಖನನವನ್ನು ನಡೆಸಿತು.

	1954ರಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ವತಿಯಿಂದ ಬಿ.ಕೆ. ಥಾಪರ್ ಅವರು ಇಲ್ಲಿ ಮತ್ತೆ ಉತ್ಖನನ ನಡೆಸಿದರು . ಇದರಿಂದ ಇಲ್ಲಿಯ ಸಾಂಸ್ಕøರಿಕ ಘಟ್ಟಗಳನ್ನು ಈ ಮುಂದಿನಂತೆ ಅನುಕ್ರಮವಾಗಿ ಗುರುತಿಸಲಾಯಿತು ; 

ತಾಮ್ರ ಶಿಲಾಯುಗ ಸಂಸ್ಕøತಿ ( ಕ್ರಿ. . ಪೂ . ಸು.  1000-400)
ಬೃಹತ್ ಶಿಲಾ ಸಂಸ್ಕøತಿ ( ಕ್ರಿ. ಪೂ. ಸು. 200-ಕ್ರಿ. ಶ. 50 )
ಆದಿಚಾರಿತ್ರಿಕ ಸಂಸ್ಕøತಿ ( ಕ್ರಿ. ಶ. ಸು. 50-300 )
ಮಧ್ಯಯುಗೀನ ಸಂಸ್ಕøತಿ ( ಕ್ರಿ. ಶ. ಸು. 1000-1600)

 	ಇಲ್ಲಿಯ ತಾಮ್ರಶಿಲಾಯುಗ ಸಂಸ್ಕøತಿಯ ಘಟ್ಟದಲ್ಲಿ ತಾಮ್ರದ ಉಪಯೋಗ ಅತ್ಯಲ್ಪವಾಗಿದ್ದಂತೆ ತೋರುತ್ತದೆ. ಹೆಚ್ಚಿನ ಆಯುಧೋಪಕರಣಗಳೆಲ್ಲ ಶಿಲೆಯವು. ಅವುಗಳಲ್ಲಿ ಚರ್ಟ್ ಜಾತಿಯ ಶಿಲೆಯಿಂದ ಕೂಡಿದ ಚಿಕ್ಕ ಚಾಕು, ಅರ್ಧಚಂದ್ರ, ವರೆಗ, ಕೊರೆಗ ಮುಂತಾದ ಸೂಕ್ಷ್ಮ ಶಿಲಾಯುಧಗಳೂ ಮತ್ತು ಇವನ್ನು ಮಾಡಲು ಉಪಯೋಗಿಸುತ್ತಿದ್ದ ದುಂಡುಕಲ್ಲುಗಳು ಇವೆ. ನುಚ್ಚುಮಾಡಿದ ಕರಿ ಕಲ್ಲಿನ ಕೈ ಕೊಡಲಿಗಳೂ ಇದ್ದಂತೆ ತೋರುತ್ತದೆ. ಚನ, ಕುರಿ ಮೊದಲಾದ ಸಾಕುಪ್ರಾಣಿಗಳ ಮೂಳೆಗಳೂ ಇಲ್ಲಿ ದೊರಕಿದ್ದು , ಇವು ಪಶುಪಾಲನೆ ಮತ್ತು ಸ್ವಲ್ಪ ಮಟ್ಟಿನ ಬೇಸಾಯ ಅಂದಿನ ಜನರ ಜೀವನಾಧಾರಗಳಾಗಿದ್ದುವೆಂಬುದನ್ನು ಸೂಚಿಸುತ್ತವೆ. ಈ ಕಾಲದ ಮನೆ ಅಥವಾ ಇನ್ನಾವ ವಾಸ್ತು ಅವಶೇಷಗಳೂ ದೊರಕಿಲ್ಲ. ಕೆಲವು ಕಂಬದ ಗುಳಿಗಳಷ್ಟೇ ಕಂಡುಬಂದಿವೆ. ಆಕಾಲದ ಮಡಕೆಗಳೂ ಕಂದು ಮತ್ತು ನಸುಗೆಂಪು ಬಣ್ಣದವಾಗಿರುತ್ತಿದ್ದುವು. ಇವೆಲ್ಲ ಹೆಚ್ಚುಮಟ್ಟಿಗೆ ತಿಗರಿಯಲ್ಲಿ ತಯಾರಾದವು. ಕೈಯಲ್ಲಿ ಮಾಡಿದ ಮಡಕೆಗಳೂ ಅತ್ಯಲ್ಪ ಸಂಖ್ಯೆಯಲ್ಲಿ ಕಂಡುಬಂದಿವೆ. ಈ ಸಂಸ್ಕøತಿಯ ಸ್ಥಳಗಳಲ್ಲಿ ಕಾರ್ನೀಲಿಯನ್ , ಅಗೇಟ್, ಶಂಖ ಗಾಜು ಮುಂತಾದ ಮಣ್ಣಿಂದ ಮಾಡಿದ ಮಣಿಗಳೂ ದೊರಕಿವೆ.

	ಬೃಹತ್ ಶಿಲಾ ಸಮಾಧಿಗಳು ಮತ್ತು ಕಬ್ಬಿಣದ ಬಳಕೆ ಬೃಹತ್ ಶಿಲಾ ಸಂಸ್ಕøತಿಯ  ಕಾಲದ ವೈಶಿಷ್ಟಗಳು. ಈ ಸಂಸ್ಕøತಿಗೆ ಸಾಮಾನ್ಯ ವಾದ ಕಪ್ಪು ಮತ್ತು ಕೆಂಪು ಬಣ್ಣದ, ತಿಗರಿ ಮೇಲೆ ಮಾಡಿದ ಮಡಕೆಗಳು ಹೇರಳವಾಗಿ ಕಂಡು ಬಂದುವು. ಗಾಜು , ಶಂಖ  ಇವುಗಳಿದ ಮಾಡಿದ ಬಳೆ ಮತ್ತು ಮಣಿಗಳು ಚಿಕ್ಕ ಕಂಬದ ಗುಳಿಗಳನ್ನು ಬಿಟ್ಟರೆ ಆ ಕಾಲದ ಮನೆಗಳ ಬಗ್ಗೆ ಯಾವ ಮಾಹಿತಿಯೂ ದೊರೆಯಲ್ಲಿಲ್ಲ. ಕೆಲವು ಕಲ್ಲಿನ ಆಯುಧಗಳು ಮತ್ತು ಪ್ರಾಣಿಗಳ ಅವಶೇಷಗಳಿಂದ ಈ ಕಾಲದ ಜನ ವ್ಯವಸಾಯದಲ್ಲಿ ನಿರತರಾಗಿದ್ದರು ಹಾಗೂ ಬೇಟೆಯಾಡುವುದು ಇವೆ ಆರ್ಥಿಕ ವ್ಯವಸ್ಥೆಯ ಒಂದು ಅಂಶವಾಗಿತ್ತು ಎಂಬುದು ಸೂಚಿತವಾಗುತ್ತದೆ. ಈ ಕಾಲಕ್ಕೆ ಸಂಬಂಧಿಸಿದ 3 ಸಮಾಧಿಗಳನ್ನು ಇಲ್ಲಿ ಅಗೆಯಲಾಯಿತು. ಇವುಗಳಲ್ಲಿ ಐದು ವಿಧಗಳನ್ನು ಗುರುತಿಸಬಹುದು. ಈ ಗುಳಿಗಳು ಸಮಾಧಿ ರೀತಿಯವು. ಮೊದಲನೆಯ ರೀತಿಯಲ್ಲಿ ಪೂರ್ಣ ಶವವನ್ನು ಸಮಾಧಿ ಮಾಡಲಾಗಿರುತ್ತದೆ. ಎರಡನೆಯ ರೀತಿಯಲ್ಲಿ ಮೃತನ ಕೆಲವೇ ಅಸ್ಥಿಗಳನ್ನು ಮಾತ್ರ ಇಡಲಾಗುತ್ತದೆ. ಮೂರನೆಯ ರೀತಿಯಲ್ಲಿ ಗುಳಿಯ ಒಳಗೆ ಅಸ್ಥಿ ಅವಶೇಷಗಳನ್ನು ಮಡಕೆಯ ಒಳಗೆ ಇಟ್ಟು ಸಮಾಧಿ ಮಾಡಲಾಗಿರುತ್ತೆ. ನಾಲ್ಕು ಐದನೆಯ ರೀತಿಗಳು ಕ್ರಮವಾಗಿ ಒಂದು ಎರಡನೆಯ ರೀತಿಯವೇ; ಆದರೆ  ಇವುಗಳ ಸುತ್ತ ಶಿಲಾವರ್ತುಲವಿರುತ್ತದೆ. ಎಲ್ಲ ಬೃಹತ್ ಶಿಲಾಸಮಾಧಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತೆ, ಇಲ್ಲಿಯ ಸಮಾಧಿಗಳಲ್ಲಿ ಸಹ ಕಬ್ಬಿಣದ ಆಯುಧ ಮತ್ತು ಉಪಕರಣಗಳು, ಕಪ್ಪು ಬುಡದಲ್ಲಿ ಬೂದಿ ಅಥವಾ ಸಣ್ಣ ಪುಡಿಯನ್ನು ಹರಡಿರುವುದು ಹಾಗೂ ಶವಗುಳಿಗಳು ಸಾಮಾನ್ಯವಾಗಿ ಉತ್ತರ-ದಕ್ಷಿಣ ನೇರದಲ್ಲಿರುವುದು ಇಲ್ಲಿಯ ಸಮಾಧಿಗಳ ವೈಶಿಷ್ಟ್ಯಗಳು. ಅಲ್ಲದೆ ಒಂದು ಮತ್ತು ನಾಲ್ಕನೆಯ ವಿಧದ ಸಮಾಧಿಗಳು  ಪೂರ್ಣ ಶವದ ಸಮಾಧಿಗಳಾಗಿದ್ದು, ಅವು ವಾಸದ ನೆಲೆಗಳಲ್ಲೇ ಕಂಡುಬಂದಿರುವುದು ಗಮನಾರ್ಹ ಅಂಶ. ಬೃಹತ್ ಶಿಲಾಸಮಾಧಿಗಳಿಗೆ ಸೇರಿದ ಕೆಲವು ನೆಡುಗಲ್ಲುಗಳನ್ನು ಇಲ್ಲಿಯ ಉತ್ಖನನದಲ್ಲಿ ಪರೀಕ್ಷಿಸಲಾಯಿತು. ಆದರೆ ಅವು ಶವಸಂಸ್ಕಾರ ವಿಧಿಗೆ ಸಂಬಂಧಿಸಿದವಂಬುದಕ್ಕೆ ಯಾವ ಸೂಚನೆಯೂ ದೊರೆಯಲಿಲ್ಲ.

	ಆದಿ ಚಾರಿತ್ರಿಕ  ಘಟ್ಟಕ್ಕೆ ಸಂಬಂಧಿಸಿದಂತೆ ಸಾಮಾನ್ಯ ರೀತಿಯ ಕೆಂಪು ಹಾಗೂ ಕಪ್ಪು, ಮತ್ತು ಕೆಂಪು ಬಣ್ಣದ ಮಡಕೆಗಳ ಜೊತೆಗೆ, ಸುದ್ದೆಯ ಗೀಳುಗಳಿದ ಅಲಿಂಕೃರವಾದ ಮಡಕೆಗಳೂ ಕಂಡುಬಂದುವು. ಚರ್ಟ್ ಜಾತಿಯ ಕಲ್ಲುಗಳ ಮತ್ತು ಸುಟ್ಟ ಮಣ್ಣಿನ ಮಣಿಗಳು, ಗಾಜಿನ ಮತ್ತು ಶಂಖದ ಬಳೆಗಳು ಈ ಸ್ತರಗಳಲ್ಲಿ ದೊರೆತುವು. ಕಬ್ಬಿಣದ ವಸ್ತುಗಳು ಸ್ವಲ್ಪ ಸಂಖ್ಯೆಯಲ್ಲಿದ್ದುವು. ಈ ಕಾಲದ ಹೊತ್ತಿಗೆ ನಾಣ್ಯಗಳ ಬಳಕೆ ರೂಪಿತವಾದಿದ್ದು ಇಲ್ಲಿಯ ಉತ್ಖನನದಲ್ಲಿ ಒಂದು ಸೀಸದ ನಾಣ್ಯ ದೊರೆಯಿತು.

	ಮಧ್ಯಯುಗೀನ ಸ್ತರಗಳಲ್ಲಿ ಬೂದು ಬಣ್ಣದ ನಯಮಾಡಿದ ಮಡಕೆಗಳು ಹೆಚ್ಚಾಗಿ ದೊರೆತುವು. ಬಹು ವರ್ಣದ ಗಾಜಿನ ಬಳೆಗಳು, ಗಾಜಿನ ಮಣಿಗಳು, ಕುತ್ಬುದ್ದೀನ್  ಮುಬಾರಕ್ ಷಾ ಖಿಲ್ಜಿಯ ಒಂದು ನಾಣ್ಯ  ಇವು ದೊರೆತ ಇತರ ಮುಖ್ಯ ವಸ್ತುಗಳು.

	ಮಸ್ಕಿಯ ನೆಲೆಯಲ್ಲಿ ದೊರಕಿರುವ ಮಣಿಗಳ ಸಂಖ್ಯಾ ವೈವಿಧ್ಯದಿಂದ ಇದು ಬಹುಶಃ ಮಣೀಗಳ ತಯಾರಿಕಾ ಕೇಂದ್ರವಾಗಿರಬೇಕೆಂಬ ಊಹೆ ಇದೆ. ಪ್ರಾಚೀನ ಕಾಲದಲ್ಲಿ ಮಸ್ಕಿ ದೂರದ  ಪ್ರದೇಶಗಳೊದನೆ ವ್ಯಾಪಾರ ಸಂಪರ್ಕವನ್ನು ಹೊಂದಿದ್ದಿರಬಹುದು. ಬಳೆಗಾಗಿ ಉಪಯೋಗಿಸಿರುವ ಶಂಖ ಸಮುದ್ರದಲ್ಲಿ ದೊರೆಯುವ ರೀತಿಯದು; ಇಲ್ಲಿ ದೊರೆತಿರುವ ನೀಲೋಪಲ ಶಿಲೆಯ ಮಣಿಗಳಿಗೆ ಪರ್ಷಿಯಾ ಪ್ರದೇಶದಿಂದ ಶಿಲೆ ಬಂದಿರಬೇಕೆನಿಸುತ್ತದೆ ; ಹಿಂದಿನ ಉತ್ಖನನದಲ್ಲಿ ದೊರಕಿರುವ ಉರುಳೆಯಾಕಾರದ ಒಂದು ಶಿಲಾಸಮುದ್ರೆ ಪಶ್ಚಿಮ ಏಷ್ಯದಲ್ಲಿ ಪ್ರಚಲಿತವಾಗಿದ್ದ ರೀತಿಯದು. ಆದಿ ಚಾರಿತ್ರಿಕ ಕಾಲಕ್ಕೆ ಸಂಬಂಧಿಸಿದ ಬುದ್ಧನ ಒಂದು ಮೂರ್ತಿಯ ಒಂದು ಭಾಗ ಇಲ್ಲಿ ದೊರಕಿದ್ದು. ಒಂದು ಕಾಲದಲ್ಲಿ ಆ ಧರ್ಮ ಇಲ್ಲಿ ಪ್ರಚಲಿತವಾಗಿತ್ತೆನಿಸುತ್ತದೆ.

	 ಇಲ್ಲಿ ದೊರಕಿರುವ ವಿಪುಲ ಸಾಮಗ್ರಿಗಳಿಂದ ಇದು ಬಹು ಮಹತ್ತ್ವದ ಪ್ರಾಗೈತಿಹಾಸಿಕ ನಿವೇಶನ ಎಂದು ಖಚಿತವಾಗುತ್ತದೆ. ಪ್ರಾಗೈತಿಹಾಸಿಕ ಮತ್ತು ಐತಿಹಾಸಿಕ  ಕಾಲದಲ್ಲಿ ಇದು ಬೃಹತ್ ನಗರವಾಗಿರಬೇಕು. ಅಶೋಕನ ಶಾಸನಗಳಲ್ಲಿ ಹೆಸರಿಸಿರುವ ಸುವರ್ಣಗಿರಿ ಮಸ್ಕಿಯೇ ಇರಬಹುದೆಂಬ ಊಹೆಗೂ ಅವಕಾಶವಿದೆ.                                                                                     
	                                                                
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ